ನಿಟ್ಟೂರು ನಂಜಯ್ಯ :-
	ಸು. 1725. ವೀರಶೈವ ಕವಿ. ಸ್ಥಳ ನಿಟ್ಟೂರು. ಕೇಶಿರಾಜನ ಶಬ್ಧಮಣಿದರ್ಪಣವೆಂಬ ವ್ಯಾಕರಣ ಗ್ರಂಥಕ್ಕೆ ಟೀಕೆಯನ್ನು ಬರೆದವ. ತನ್ನ ಟೀಕೆಯಲ್ಲಿ ಅಲ್ಲಲ್ಲಿ ಭಟ್ಟಾಕಳಂಕನ ಶಬ್ದಾನುಶಾಸನದ (1604) ಸೂತ್ರಗಳನ್ನು ಬಳಸಿಕೊಂಡಿರುವುದರಿಂದ ಆತನಿಗಿಂತ ಈತ ಈಚಿನವನೆಂಬುದು ಸ್ಪಷ್ಟ. ಆದ್ದರಿಂದ ಈತನ ಕಾಲ ಸು. 1725 ಆಗಿರಬಹುದೆಂದು ಆರ್. ನರಸಿಂಹಾಚಾರ್ಯರ ಅಭಿಪ್ರಾಯ.

ಈತ ಶಬ್ದಮಣಿದರ್ಪಣದ ಪ್ರತಿಸೂತ್ರಕ್ಕೂ ಪದಚ್ಛೇದ, ಅನ್ವಯ, ಟೀಕು-ಎಂಬುದಾಗಿ ಮೂರು ಭಾಗ ಮಾಡಿಕೊಂಡು ಅರ್ಥ ವಿವರಿಸಿದ್ದಾನೆ. ಸಂದಿಗ್ಧವಾದೆಡೆಯಲ್ಲಿ ಶಬ್ದಾನುಶಾಸನದ ಸೂತ್ರಗಳನ್ನು ಉದ್ಧರಿಸಿ ವಿಚಾರ ಎಂಬ ಭಾಗದಲ್ಲಿ ವಿಸ್ತøತ ವಿವರಣೆ ನೀಡಿದ್ದಾನೆ. ಈತನ ಟೀಕು ಸರಳವಾಗಿದ್ದು ಅಭ್ಯಾಸಿಗಳಿಗೆ ಕೈಗನ್ನಡಿಯಂತಿದೆ. ಉದಾಹರಣೆಗೆ : 
ಸೂತ್ರ:    ಅವತರಿಸಿರ್ಕುಮುವರ್ಣದ

              ಋವರ್ಣದೋ ತ್ವೌತ್ವದಗ್ರದೊಳ್ ಸ್ವರಮಿರೆ ವ
              ತ್ವ ವಿಧಾನಂ ಬಹುಳತೆಯ
              ತ್ವ ವತ್ವದೊಳ್ ಸಂಸ್ಕøತಕ್ಕೆ ತಾನಿಲ್ಲೆಂದುಂ

      ಪದಚ್ಛೇದ: ಅವತರಿಸಿ ಇರ್ಕುಂ, ಉವರ್ಣದ ಋವರ್ಣದ ಓತ್ವೌತ್ವದ
              ಅಗ್ರದೊಳ್ ಸ್ವರಂ ಇರೆ, ವತ್ವ ವಿಧಾನಂ ; ಬಹುಳತೆಯತ್ವ
              ವತ್ವದೊಳ್ ಸಂಸ್ಕøತಕ್ಕೆ ತಾಂ ಇಲ್ಲ ಎಂದುಂ.

      ಅನ್ವಯ:   ಉವರ್ಣದ ಋವರ್ಣದ ಓತ್ವೌತ್ವದ ಅಗ್ರದೊಳ್ ಸ್ವರಂಇರೆ,
               ವತ್ವವಿಧಾನಂ ಅವತರಿಸಿ ಇರ್ಕುಂ ; ಸಂಸ್ಕøತಕ್ಕೆ ಯತ್ವವತ್ವದೊಳ್
              ಬಹುಳತೆ ತಾಂ ಎಂದುಂ ಇಲ್ಲ.

      ಟೀಕು:    ಉವರ್ಣದ=ಉಊ ಎಂಬ ಸವರ್ಣದ; ಋವರ್ಣದ=ಋಋ ಎಂಬ 
              ಸವರ್ಣದ; ಓತ್ವೌತ್ವದ=ಓಕಾರ ಔಕಾರದ ; ಅಗ್ರದೊಳ್=ಮುಂದೆ; 
              ಸ್ವರಂ=ಸ್ವರಾಕ್ಷಂ; ಇರೆ=ಇರೆ; ವತ್ವವಿಧಾನಂ=ವಕಾರದ ವಿಧಾನಂ.
              ಅವತರಿಸಿರ್ಕುಂ=ಹುಟ್ಟಿರ್ಪುದು ; ಸಂಸ್ಕøತಕ್ಕೆ=ಸಂಸ್ಕøತ ಶಬ್ದಕ್ಕೆ.
              ಯತ್ವವತ್ವದೊಳ್=ಯತ್ವಸಂಧಿ ವತ್ವಸಂಧಿಯಲ್ಲಿ; ಬಹುಳತೆ=
              ಬಹುಳತ್ವ. ತಾ=ತಾಂ. ಎಂದುಂ=ಆವಾಗಳುಂ. ಇಲ್ಲ=ಉಂಟಾಗದು.

      ವಿಚಾರಂ: ಕನ್ನಡದ ಶಬ್ದದಲ್ಲಿ ಯತ್ವ ವತ್ವಸಂಧಿಗಳಲ್ಲಿ ಬಹುಳಮುಂಟೆಂಬು
              ದರ್ಥಂ. ಆತ್ವದಿನಿವರ್ಣದಿಂದ ಮತ್ತೋತ್ವದಿನೈತ್ವದಿನೆವರ್ಣದಿಂ
              ಮುಂದಕ್ಕುಂ ಯುತ್ವಂ. ಉವರ್ಣದ ಋವರ್ಣದೋತ್ವೌತ್ವದಗ್ರ
              ದೊಳ್ಸ್ವರ ವಿರೆ ವತ್ವ ವಿದಾನವೆಂಬ ಈ ಯತ್ವ ಸಂಧಿ ವತ್ವ
              ಸಂಧಿಗಳಲ್ಲಿ ವಿಚಾರಮುಂಟು; ಆತ್ವಮದೆಂತೆಂದೊಡೆ ಶಬ್ದಾನುಶಾಸನ
              ದಲ್ಲಿ (ಸೂತ್ರಂ 1ನೆಯ ಪಾದದ 38ನೆಯ ಸೂತ್ರಂ) ಆತ ಓಷ್ಠೇ
              ಸ್ವರೇಪರೇ ಅಕಾರಸ್ಯವಗ್ಭವತಿ ಎಂಬುದಾಗಿ ಅಕಾರಕ್ಕೆ ಓಷ್ಠ್ಯ ಸ್ವರಂ
              ಪರಮಾಗೆ ವತ್ವಸಂಧಿಯಾಗುವುದು. ಆ+ಉದಕಂ= ಆವುದಕಂ.
              ಆ+ಊರ್=ಆವೂರ್; ಆವೂಟಂ ; ಆಮೇಲೆ-ಎಂಬಂತೆ ಓಷ್ಠ್ಯ
              ಗ್ರಹಣದಿಂ ಕಂಠೋಷ್ಠಮಂ ಸಂಗ್ರಹಿಸಲ್ಪಟ್ಟುದು.

	ಈತ ಸಂಸ್ಕøತದಲ್ಲಿ ವೇದಾಂತಸಾರ ವೀರಶೈವಚಿಂತಾಮಣಿ ಎಂಬ ಗ್ರಂಥವನ್ನು ಬರೆದಿದ್ದಾನೆ. ಇದನ್ನು ಪೂರ್ವಖಂಡ ಮತ್ತು ಉತ್ತರಖಂಡವೆಂದು ವಿಭಾಗಿಸಲಾಗಿದೆ. ರಂಗಾಚಾರ್ಯ ಶಾಸ್ತ್ರಿ ಮುಧೋಳಕರ್ ಎಂಬುವರು ಇದನ್ನು ಮರಾಠಿಗೆ ಭಾಷಾಂತರಿಸಿದ್ದಾರೆ. ಇದರ ಉತ್ತರಖಂಡದ ಮೂರು ಹಸ್ತಪ್ರತಿಗಳನ್ನು ಮಣೂರು ಮಠಾಧ್ಯಕ್ಷ ಮಲ್ಲಿಕಾರ್ಜುನಶಾಸ್ತ್ರಿಗಳು ಸಂಪಾದಿಸಿ ಸೋಲಾಪುರ ವೀರಶೈವ ಲಿಂಗಿ ಬ್ರಾಹ್ಮಣ ಧರ್ಮಗ್ರಂಥ ಮಾಲೆಯ ಆಶ್ರಯದಲ್ಲಿ (1908) ಪ್ರಕಟಿಸಿದ್ದಾರೆ. ಪೂರ್ವಖಂಡ ಅಲಭ್ಯ. ಈ ಗ್ರಂಥದ ಮೂರು ಹಸ್ತಪ್ರತಿಗಳು ಬಳ್ಳಾರಿಯ ಸುತ್ತಮುತ್ತ ದೊರೆತಿರುವುದರಿಂದಲೂ, ಸೋಲಾಪುರದಲ್ಲಿ ಪ್ರಕಟವಾಗಿರುವುದರಿಂದಲೂ ಈತ ಉತ್ತರ ಕರ್ನಾಟಕ ಪ್ರದೇಶದವನಾಗಿರಬೇಕೆಂದು ಊಹಿಸಬಹುದಾಗಿದೆ. ಈತನ ಹುಟ್ಟೂರಾದ ನಿಟ್ಟೂರು ಬಳ್ಳಾರಿಯ ಸಮೀಪದಲ್ಲೆಲ್ಲೋ ಇರಬೇಕೆಂದು ಕಾಣುತ್ತದೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ನಿಟ್ಟೂರು ಗ್ರಾಮ ಈತನ ಹುಟ್ಟೂರಾಗಿರಬೇಕೆಂದೂ ಕೆಲವರ ಅಭಿಪ್ರಾಯ. ಈತನ ಗ್ರಂಥದ ಪೂರ್ವಖಂಡ ಲಭ್ಯವಾಗಿದ್ದರೆ, ಕವಿಯ ಜೀವನದ ವಿಚಾರ ತಿಳಿಯಲು ಅನುಕೂಲವಾಗುತ್ತಿತ್ತು. 

	ಪೂರ್ವಖಂಡದಲ್ಲಿ ವೀರಶೈವ, ಶುದ್ಧಶೈವ, ಮಿಶ್ರಶೈವ-ಮುಂತಾದ ಶೈವರು ಆಚರಿಸಬೇಕಾದ ಸಾಮಾನ್ಯ ಧರ್ಮ ನಿರೂಪಿತವಾಗಿದೆ. ಉತ್ತರಖಂಡದಲ್ಲಿ 21 ಪ್ರಕರಣಗಳಿದ್ದು, ಅವುಗಳಲ್ಲಿ ವೀರಶೈವ ವಿಶೇಷ ಧರ್ಮಗಳು ನಿರೂಪಿತವಾಗಿವೆ. 

	ಲಿಂಗಾಂಗಸಂಯೋಗ ಮತ್ತು ಶಿವಜೀವೈಕ್ಯರೂಪಗಳನ್ನು ತಿಳಿಸುವುದು ಈ ಗ್ರಂಥದ ಗುರಿ ಎಂದು ಹೇಳಿ, ಇವುಗಳ ಅರಿವಿನಿಂದಲೇ ಮುಕ್ತಿ ಎಂಬುದಾಗಿ ಕವಿ ತಿಳಿಸಿದ್ದಾನೆ. ಈತನಿಗೆ ಕಾಮಿಕಾಗಮ, ವೀರಾಗಮ ಮುಂತಾದ ಆಗಮಗಳೂ ಶಂಕರಸಂಹಿತೆ, ಸೂತಸಂಹಿತೆ ಮುಂತಾದ ಸಂಹಿತೆಗಳೂ, ಶೈವಪುರಾಣ, ಆದಿತ್ಯ ಪುರಾಣ, ಮಾನವಪುರಾಣ ಮೊದಲಾದ ಪುರಾಣಗಳೂ ಸಿದ್ಧಾಂತಶಿಖಾಮಣಿ, ವಿಶೇಷಾರ್ಥಪ್ರಕಾಶಿಕೆ, ಆರಣ್ಯಕಗಳು, ಉಪನಿಷತ್ತುಗಳು-ಇವುಗಳೂ ಚೆನ್ನಾಗಿ ಪರಿಚಿತವಿದ್ದುದರಿಂದ ಅವುಗಳಲ್ಲಿ ಹೇಳಲಾಗಿರುವ ವೀರಶೈವ ಧರ್ಮ ಮತ್ತು ಆಚಾರಗಳ ಲಕ್ಷಣಗಳನ್ನು ಸಂದರ್ಭೋಚಿತವಾಗಿ ಬಳಸಿಕೊಂಡು ಅವುಗಳಿಗೆ ವಿವರ ನೀಡಿದ್ದಾನೆ.

	ಭಸ್ಮಧಾರಣೆ, ಲಿಂಗಧಾರಣೆ, ರುದ್ರಾಕ್ಷಿಧಾರಣೆ, ಲಿಂಗಪೂಜೆ-ಇವುಗಳ ವಿಧಾನಗಳನ್ನು ವಿಸ್ತಾರವಾಗಿ ಪ್ರಸ್ತಾಪಿಸಿದ್ದಾನೆ. ಶಿವಸಂಸ್ಕಾರವಿಲ್ಲದವರನ್ನು ಶ್ವಪಚನೆಂದು ಕರೆದಿದ್ದಾನೆ. ಶಿವಸಂಸ್ಕಾರವನ್ನು ಪಡೆದ ಮೇಲೆ ಅವನಲ್ಲಿ ಜಾತಿಭೇಧವನ್ನೆಣಿಸಬಾರದು ; ಹಾಗೆ ಭೇದವನ್ನೆಣಿಸಿದರೆ, ಅಂಥವರಿಗೆ ರೌರವ ನರಕ ಪ್ರಾಪ್ತವಾಗುತ್ತದೆಂದು ಹೇಳಿದ್ದಾನೆ. ಬ್ರಹ್ಮಜ್ಞಾನವುಳ್ಳವನು ಬ್ರಾಹ್ಮಣನೆಂದೂ ಮಹಾಭಾರತದಲ್ಲಿ ಹೇಳಲಾಗಿದೆಯಾಗಿ, ಬ್ರಹ್ಮಜ್ಞಾನವುಳ್ಳವನಾದುದರಿಂದ ಶೈವನೂ ಬ್ರಾಹ್ಮಣನೆನಿಸುತ್ತಾನೆಂದು ಈತನ ವಾದ.

	ಅವತಾನ ಮಂತ್ರದಲ್ಲಿ-ಕಲಿಯುಗದಲ್ಲಿ ನಂದೀಶ್ವರನೇ ಮುಂತಾದ ಗಣಧರರು ಬಸವಣ್ಣ, ಪ್ರಭುದೇವ, ರೇವಣಸಿದ್ದರಾಗಿ ಜನಿಸುತ್ತಾರೆ. ಅವರ ಜೀವನ ಚರಿತ್ರೆಯೂ ಸೋಮನಾಥ ಭಾಷ್ಯ, ಬಸವಪುರಾಣ, ಆರಾಧ್ಯಚಾರಿತ್ರದಲ್ಲಿ ಪ್ರಸಿದ್ಧವಾಗುತ್ತವೆ ಎಂದು ಹೇಳುವುದರ ಮೂಲಕ ಬಸವಾದಿಗಳನ್ನು ಸ್ಮರಿಸಿ ಕೊಂಡಿದ್ದಾನೆ. ವೀರಶೈವಧರ್ಮಾಭ್ಯಾಸಿಗಳಿಗೆ ಇದೊಂದು ಆಕರಗ್ರಂಥ.
(ಎಚ್.ಎನ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ